ಕೊಸೂತ್, ಲಾಜಸ್

1802-1894. ಹಂಗರಿಯ ದೇಶಭಕ್ತ, 1848-49ರಲ್ಲಿ ಆ ದೇಶದಲ್ಲಿ ನಡೆದ ಕ್ರಾಂತಿಯ ಅಗ್ರನಾಯಕ. ಇವನು 1802ರ ಸೆಪ್ಟೆಂಬರ್ 19ರಂದು ಈಗಿನ ಸ್ಲೊವಾಕಿಯದ ಮೊನಾಕ್‍ನಲ್ಲಿ ಲೂಥರಾನ್ ಕ್ರೈಸ್ತಕುಟುಂಬವೊಂದರಲ್ಲಿ ಹುಟ್ಟಿದ. ಸರಾಸ್ ಪಾಟಕ್‍ನ ಪ್ರಾಟೆಸ್ಟಂಟ್ ಶಾಲೆಯಲ್ಲಿ ವ್ಯಾಸಂಗ ಮಾಡಿ ತನ್ನ ಜನ್ಮಸ್ಥಳಕ್ಕೆ ಹಿಂದಿರುಗಿ ಅಲ್ಲಿ ಶ್ರೀಮಂತ ವಿಧವೆಯೊಬ್ಬಳ ಪ್ರತಿನಿಧಿಯಾದ. 1825-27 ಮತ್ತು 1832-36 ರ ಕಾಲದಲ್ಲಿ ರಾಷ್ಟ್ರೀಯ ಸಂಸತ್ತಿನಲ್ಲಿ ಕೆಲವು ಶ್ರೀಮಂತರ ಪರವಾಗಿ ಮತನೀಡುವ ಹಕ್ಕಿಲ್ಲದೆ ಭಾಗವಹಿಸುವ ಅವಕಾಶ ಇವನಿಗೆ ಒದಗಿತ್ತು. ಆ ಸಂದರ್ಭದಲ್ಲಿ ಇವನು ತನ್ನ ಸಾಮಾಜಿಕ, ರಾಜಕೀಯ ತತ್ತ್ವಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ತೀಕ್ಷ್ಣರಾಷ್ಟ್ರೀಯತೆ ಮತ್ತು ತೀವ್ರಗಾಮಿತ್ವ ಧೋರಣೆ ತಳೆದ ಇವನು ಶ್ರೀಮಂತರ ಮೇಲೆ ಹೆಚ್ಚಿಗೆ ತೆರಿಗೆ ವಿಧಿಸಬೇಕೆಂದೂ ರೈತರಿಗೆ ಪೂರ್ಣ ಸ್ವಾತಂತ್ರ್ಯ ದೊರಕಿಸಬೇಕೆಂದೂ ಹೋರಾಡಿದ. ದೇಶದ ಸಾಮಾಜಿಕ ಸಮಸ್ಯೆಗಳ ಪರಿಹಾರವಾಗಬೇಕಾದರೆ ಆ ದೇಶ ವಿಯೆನ್ನಾ ಸರ್ಕಾರದಿಂದ ಬಿಡುಗಡೆ ಹೊಂದಿ ಸ್ವತಂತ್ರ ರಾಷ್ಟ್ರವಾಗಬೇಕೆಂದು ಸಾರಿದ. ಬಹುಬೇಗ ಇವನ ಕೀರ್ತಿ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಬೆಳೆಯಿತು. ಇವನು ತನ್ನ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸುವ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸುವ ಉದ್ದೇಶದಿಂದ ರಾಷ್ಟ್ರೀಯ ಸಭೆಯ ಚರ್ಚೆಗಳನ್ನು ಬರೆದು ದೇಶಾದ್ಯಂತ ಪ್ರಸಾರ ಮಾಡಲಾರಂಭಿಸಿದ. 1837ರಲ್ಲಿ ರಾಷ್ಟ್ರೀಯ ಸಭೆಯಲ್ಲಿ ನಡೆದ ಚರ್ಚೆಗಳನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಸುಮಾರು 3 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಯಿತು. 

	ಸೆರೆಯಿಂದ ಬಿಡುಗಡೆಯಾದ ಮೇಲೆ 1840ರಲ್ಲಿ ಈತ ಪೆಸ್ಟಿ ಹಿರ್‍ಲ್ಯಾಪ್ ಎಂಬ ಹೆಸರಿನ ದ್ವಿವಾರ ಪತ್ರಿಕೆಯೊಂದರ ಸಂಪಾದಕನಾಗಿ ಅದನ್ನು ಕೆಲವು ಕಾಲ ನಡೆಸಿದ, ಇವನ ಲೇಖನಗಳಿಂದ ಇವನಿಗೆ ಜನಪ್ರಿಯತೆ ದೊರಕಿದರೂ ಈತ ಮಂದಗಾಮಿ ಸುಧಾರಕರ ಅಸಮಾಧಾನ ಗಳಿಸಿಕೊಂಡ. 1844ರಲ್ಲಿ ಆ ಪತ್ರಿಕೆಯ ಸಂಪಾದಕ ಪದವಿಯನ್ನು ಕಳೆದುಕೊಂಡ. ಮತ್ತೆ ತನ್ನದೇ ಆದ ಬೇರೆ ಪತ್ರಿಕೆ ನಡೆಸಲು ಇವನಿಗೆ ಅನುಮತಿ ದೊರಕಲಿಲ್ಲ. ಕೈಗಾರಿಕೆಗಳನ್ನು ಬೆಳೆಸಲು ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅನಂತರ ರಾಜಕೀಯ ಚಳವಳಿಯಲ್ಲಿ ಧುಮುಕಿ 1847ರಲ್ಲಿ ಪೆಸ್ಟ್ ಕೌಂಟಿಯಿಂದ ರಾಷ್ಟ್ರೀಯ ಸಮಿತಿ ಸದಸ್ಯನಾಗಿ ಆಯ್ಕೆಯಾದ. 1848ರಲ್ಲಿ ಫ್ರಾನ್ಸಿನಲ್ಲಿ ಕ್ರಾಂತಿಯಾದಾಗ ಹೆಂಗಸರಿಗೂ ಸ್ವಾತಂತ್ರ್ಯಬೇಕೆಂದು ಉದಾರವಾದಿ ಪಕ್ಷದ ಮುಖಂಡನಾಗಿ ಹೋರಾಡಿದ; ವಿಯೆನ್ನದ ಸರ್ಕಾರದ ನೊಗದಿಂದ ಹಂಗರಿಯ ವಿಮೋಚನೆಯಾಗಬೇಕೆಂದು ವಾದಿಸುತ್ತಿದ್ದಾಗ ವಿಯೆನ್ನ ಕ್ರಾಂತಿಯ ಸುದ್ದಿ ತಲುಪಿ, ಅದೇ ಸಮಯದಲ್ಲಿ ಹಂಗರಿಗೂ ಜವಾಬ್ದಾರಿ ಸರ್ಕಾರ ರಚಿಸಬೇಕೆಂದು ಪ್ರತಿಪಾದಿಸಿ ಕೊನೆಗೆ ಅದಕ್ಕೆ ವಿಯೆನ್ನದ ಒಪ್ಪಿಗೆ ದೊರಕಿಸಿಕೊಂಡ. ಮುಂದೆ ಇವನಿಗೆ ಹಂಗರಿಯ ಸರ್ಕಾರದಲ್ಲಿ ಹಣಕಾಸಿನ ಮಂತ್ರಿಯ ಪದವಿ ದೊರಕಿತು. ಹಣಕಾಸು, ರಕ್ಷಣೆ ಇವೆರಡೂ ವಿಚಾರಗಳಲ್ಲಿ ಆಸ್ಟ್ರಿಯಕ್ಕೂ ಹಂಗರಿಗೂ ಇನ್ನೂ ಒಪ್ಪಂದವಾಗಿರಲಿಲ್ಲ. ಹಂಗರಿಯಲ್ಲಿ ವಸೂಲಾದ ಕಂದಾಯದ ಹಣವನ್ನು ವಿಯೆನ್ನಕ್ಕೆ ಸಾಗಿಸದಂತೆ ಕೊಸೂತ್ ತಡೆ ಹಾಕಿದ. ತೀವ್ರವಾದಿ ಗುಂಪಿನ ನೇತಾರನಾಗಿ ಕೊಸೂತ್ ಆಗ ಅತ್ಯಂತ ಪ್ರಮುಖ ಪಾತ್ರ ವಹಿಸಿದ. ಹಂಗರಿಯಿಂದ ಇಟಲಿಗೆ ಸೈನ್ಯವನ್ನು ಕಳಿಸದಂತೆ ಅಲ್ಲಿಯ ಶಾಸನ ಸಭೆ ನಿರ್ಣಯಿಸುವಂತೆ ಮಾಡಿ, ವಿಯೆನ್ನದೊಂದಿಗೆ ಸಂಬಂಧ ಕಡಿದುಕೊಳ್ಳಲು ಕಾರಣನಾದ. ಕ್ರೋಟರು ಮತ್ತು ಸರ್ಬರ ಆಕ್ರಮಣವನ್ನೆದುರಿಸಲು ಹಣವನ್ನೂ ಸೈನಿಕರನ್ನೂ ಮೀಸಲಾಗಿಡಬೇಕೆಂಬುದು ಇವನ ಕರೆಯಾಗಿತ್ತು. ಇದಕ್ಕೆ ಹಣವಿರಲಿಲ್ಲ. ಕ್ರೋಷಿಯನ್ ಸೇನಾನಿ ಮತ್ತು ಗರ್ನವರ್ ಯೆಲಾಚಿಚನ ಸೇನೆ ಹಂಗರಿಯ ಆಕ್ರಮಣ ನಡೆಸಿದಾಗ ಮಂತ್ರಿಮಂಡಲ ರಾಜಿನಾಮೆ ನೀಡಿತ್ತು. ಕೊಸೂತ್ ವಸ್ತುತಃ ಸರ್ವಾಧಿಕಾರಿಯಾದ. ಮುಂದಿನ ತಿಂಗಳುಗಳಲ್ಲಿ ಇವನ ಹಿರಿಮೆಯೂ ದೌರ್ಬಲ್ಯವೂ ವ್ಯಕ್ತವಾದುವು. ಇವನ ಧೈರ್ಯಸ್ಥೈರ್ಯಗಳು ಅಸಾಧಾರಣವಾಗಿದ್ದುವು. ಆ ಕಷ್ಟದ ದಿವಸಗಳಲ್ಲಿ ಇವನು ಹಂಗರಿಯ ಜನರನ್ನು ಹುರಿದುಂಬಿಸಿದ. ಆದರೆ ತನ್ನ ಸ್ವಂತ ಸೇನಾನಿಯ ಬಗ್ಗೆಯೇ ಅಸೂಯೆಪಟ್ಟ.; ಸಂಶಯಗ್ರಸ್ಥನಾದ. ಮೊದಲೇ ತೀವ್ರವಾಗಿದ್ದ ತೊಂದರೆಗಳು ಇದರಿಂದ ಇನ್ನೂ ಅಧಿಕವಾದುವು. ಹಂಗರಿಯ ಶಾಸನ ಸಭೆ ಇವನನ್ನು ರಾಜ್ಯಪಾಲನನ್ನಾಗಿ ಆಯ್ಕೆಮಾಡಿತು. ರಷ್ಯನ್ ಸೇನೆ ಹಂಗರಿಗೆ ನುಗ್ಗಿದಾಗ ಪರಿಸ್ಥಿತಿ ತೀರಾ ಉತ್ಕಟವಾಗಿದೆಯೆಂಬುದು ಇವನಿಗೆ ಗೋಚರವಾಯಿತು. ಇವನು ತನ್ನ ಅಧಿಕಾರಕ್ಕೆ ರಾಜೀನಾಮೆ ನೀಡಿ ತುರ್ಕಿಗೆ ಓಡಿಹೋದ.

	ತುರ್ಕಿಯಲ್ಲಿ ಎರಡು ವರ್ಷಗಳ ಕಾಲ ನಿರ್ಬಂಧದಲ್ಲಿ ವಾಸಮಾಡಿದ ಮೇಲೆ ಇವನಿಗೆ ಅಮೆರಿಕಕ್ಕೆ ಹೋಗಲು ಅವಕಾಶ ದೊರಕಿತು. ನಡುವೆ ಈತ ಮೂರು ವಾರಕಾಲ ಇಂಗ್ಲೆಂಡಿನಲ್ಲಿ ತಂಗಿದ್ದ. ಅಲ್ಲಿ ಇವನಿಗೆ ಒಳ್ಳೆಯ ಸ್ವಾಗತ ದೊರಕಿತು. ಅಮೆರಿಕನರು ಇವನನ್ನು ಉತ್ಸಾಹದಿಂದ ಸ್ವಾಗತಿಸಿದರು. ಆದರೆ ಎರಡು ದೇಶಗಳ ಸರ್ಕಾರಗಳೂ ಹಂಗರಿಗೆ ಬೆಂಬಲ ನೀಡಲಿಲ್ಲ. ಹಂಗರಿಗೆ ವಿಶ್ವದ ಸಹಾನುಭೂತಿ ಮತ್ತು ಬೆಂಬಲ ದೊರಕಿಸಿಕೊಳ್ಳಲು ಇವನು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾದುವು. ಡಾನ್ಯೂಬ್ ರಾಷ್ಟ್ರಗಳ ಒಕ್ಕೂಟವೊಂದನ್ನು ರಚಿಸಬೇಕೆಂಬ ಇವನ ಯೋಜನೆ ಸಫಲವಾಗಲಿಲ್ಲ. ಹಂಗರಿಯ ರಾಷ್ಟ್ರೀಯ ಚಳವಳಿಯೊಂದಿಗೆ ತನ್ನ ಸಂಪರ್ಕವನ್ನಂತೂ ಮುಂದುವರಿಸಿದ. ತನ್ನ ಜೀವಮಾನದ ಕೊನೆಗಾಲವನ್ನು ಟೂರಿನ್‍ನಲ್ಲಿ ಕಳೆದ. ಇವನು ತೀರಿಕೊಂಡಿದ್ದು 1894ರ ಮಾರ್ಚ್ 20 ರಂದು. ಇವನ ದೇಹವನ್ನು ಹಂಗರಿಗೆ ತಂದು ಪೆಸ್ಟ್‍ನಲ್ಲಿ ಒಪ್ಪ ಮಾಡಲು ಸರ್ಕಾರ ಅವಕಾಶನೀಡಿತ್ತು. 

	ಕೊಸೂತನ ಮಗ ಫೆರೆಂಕ್ ಕೊಸೂತ್ ಸ್ವಲ್ಪ ಕಾಲ ಹಂಗರಿಯ ಸ್ವಾತಂತ್ರ್ಯ ಪಕ್ಷದ ಅಧ್ಯಕ್ಷನಾಗಿದ್ದ. ಕೊಸೂತನ ಕೃತಿಗಳ ಮೂರು ಸಂಪುಟಗಳು 1948-51ರಲ್ಲಿ ಪ್ರಕಟವಾದುವು. ನನ್ನ ಜೀವನದ ನೆನಪುಗಳು ಎಂಬ ಅವನ ಗ್ರಂಥ ಇಂಗ್ಲಿಷಿನಲ್ಲಿ 1880ರಲ್ಲಿ ಪ್ರಕಟವಾಯಿತು.
(ಕೆ.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ